ಮಾವೋ ತ್ಸೆ ಡುಂಗ್
1893-1976. ಚೀನೀ ಕಮ್ಯೂನಿಸ್ಟ್ ನಾಯಕ; ಚೀನೀ ಗಣರಾಜ್ಯದ ಪ್ರಥಮ ಅಧ್ಯಕ್ಷ (1949-69). ಆಧುನಿಕ ಚೀನದ ಚರಿತ್ರೆಯನ್ನು ನಿರ್ಮಾಣಮಾಡಿದ ಮಹಾ ವ್ಯಕ್ತಿ. ಆಧುನಿಕ ಯುಗದ ಮಹಾನ್ ಚಾರಿತ್ರಿಕ ವ್ಯಕ್ತಿಗಳಲ್ಲೊಬ್ಬ. ಈತ ಚೀನದ ಹನನ್ ಪ್ರದೇಶದ ಬಡರೈತ ಕುಟುಂಬವೊಂದರಲ್ಲಿ 26 ಡಿಸೆಂಬರ್ 1893 ರಂದು ಜನಿಸಿದ. ಈತನ ತಂದೆ ಮಾವೊ ಷನ್ ಷೆಂಗ್; ತಾಯಿ ವೆನ್ ಚೀ ಮೈ. ಕುಟುಂಬದ ಹಿರಿಯ ಮಗನಾಗಿ ಹುಟ್ಟಿದ ಮಾವೊಗೆ ಇಬ್ಬರು ಸಹೋದರರೂ ಒಬ್ಬ ಸಹೋದರಿಯೂ ಇದ್ದರು. ಮುಂದೆ ಇವರೆಲ್ಲರೂ ಕ್ರಾಂತಿ ಹೋರಾಟದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಡಿದರು. ಮಾವೊ ಹುಟ್ಟಿದ ನಾಡು ಸೈನಿಕ ಪರಂಪರೆ ಪರಾಕ್ರಮಗಳಿಗೆ ಹೆಸರಾದ ಪ್ರಾಂತ. ಹತ್ತೊಂಬತ್ತನೆಯ ಕೊನೆಯಭಾಗದಲ್ಲಿ ಹನನ್ ಸೈನ್ಯ ತೈಪಿಂಗ್ ದಂಗೆಯನ್ನೂ ಸಿಂಕಿಯಾಂಗಿನ ಮುಸಲ್ಮಾನರ ದೊಂಬಿಯನ್ನೂ ಅಡಗಿಸುವ ಕಾರ್ಯದಲ್ಲಿ ಮುಂದಾಳುತನ ವಹಿಸಿತ್ತು. ಕ್ಷಾತ್ರ ಪರಂಪರೆ ಹಾಗೂ ಪಾಂಡಿತ್ಯ ಸಂಸ್ಕøತಿಗಳಿಗೆ ಖ್ಯಾತಿಹೊಂದಿದ ನಾಡಿನಲ್ಲಿ ಮಾವೊ ಬೆಳೆದ. ಈತನ ತಂದೆ ಕೂಡ ಸೈನ್ಯದಲ್ಲಿ ಕೆಲಕಾಲ ಸೇವೆಮಾಡಿದ್ದ. ಮಾವೊ ಹಳ್ಳಿಯ ಶಾಲೆಯಲ್ಲಿ ವಿದ್ಯೆಯನ್ನು ಕಲಿತ. ಬಾಲ್ಯದಲ್ಲಿ ಕನ್‍ಫ್ಯೂಷಿಯಸ್ಸನ ಹೇಳಿಕೆಗಳನ್ನು ಬಾಯಿಪಾಠಮಾಡುತ್ತಿದ್ದ. ಹದಿಮೂರನೆಯ ವಯಸ್ಸಿನಲ್ಲಿಯೇ ತಂದೆಯೊಡನೆ ವಾದಿಸಲಾರಂಭಿಸಿ ತನ್ನ ಅಚಲ ನಿರ್ಧಾರದ ಲಕ್ಷಣಗಳನ್ನು ವ್ಯಕ್ತಪಡಿಸುತ್ತಿದ್ದ. ತಂದೆಯನ್ನು ಪ್ರತಿಭಟಿಸಿ ತನ್ನ ತಾಯಿಯ ಊರಿಗೆ ಹೋಗಿ ಅಲ್ಲಿ ಶಿಕ್ಷಣವನ್ನು ಮುಂದುವರಿಸಿದ. ಭೂಗೋಳ-ಇತಿಹಾಸಗಳನ್ನು ಚೆನ್ನಾಗಿ ವ್ಯಾಸಂಗ ಮಾಡಿದ. ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಹನನ್ ಪ್ರಾಂತದಲ್ಲಿ ಯುದ್ಧನಡೆದಾಗ ತಾನು ಕಲಿಯುತ್ತಿದ್ದ ಚಂಗ್‍ಷಾ ಶಾಲೆಯನ್ನು ತೊರೆದು ವಿದ್ಯಾರ್ಥಿ ಸ್ವಯಂಸೇವಕನಾಗಿ ಸೇವೆ ಗೈದ. ಆಗ ಮಂಚೂ ರಾಜವಂಶ ಚೀನವನ್ನಾಳುತ್ತಿತ್ತು. ಅದು ಹೋಗಿ ಜನಪ್ರಿಯ ಸರ್ಕಾರ ಬರಬೇಕೆಂದು ನಡೆಯುತ್ತಿದ್ದ ಚಳವಳಿಗೆ ತರುಣ ಮಾವೊ ಬೆಂಬಲ ನೀಡಲು ಸುನ್‍ಯಾತ್ ಸೇನರ ಕ್ರಾಂತಿಚಳುವಳಿಯಲ್ಲಿ ಭಾಗವಹಿಸಿದ. 1912ರಲ್ಲಿ ಚೀನ ಗಣರಾಜ್ಯವಾಗಿ ಘೋಷಿಸಿಕೊಂಡಿತು. ಆದರೆ ದೇಶದ ಒಗ್ಗಟ್ಟನ್ನು ಸಾಧಿಸಲಾಗಲಿಲ್ಲ.

	ಒಂದನೆಯ ಮಹಾಯುದ್ಧ ಕಾಲದಲ್ಲಿ ತನ್ನ ತವರು ನಾಡಾದ ಹನನ್ ಪ್ರಾಂತ ಚೀನದ ರಾಷ್ಟ್ರೀಯ ವ್ಯವಹಾರದಲ್ಲಿ ಮಹತ್ತ್ವ ಕಳೆದುಕೊಳ್ಳುತ್ತಿದ್ದುದನ್ನು ಮಾವೋ ಗಮನಿಸಿದ. ದೇಶಾಭಿಮಾನದಿಂದ ಉಕ್ಕುತ್ತಿದ್ದ ಈತ ಚೀನದ ಯುವಕರು ಹೇಗೆ ದೇಶಸೇವೆ ಮಾಡಬೇಕೆಂದು ಚಿಂತಿಸುತ್ತಿದ್ದ. 1918ರಲ್ಲಿ ಈತ ಪೀಕಿಂಗ್ ವಿಶ್ವವಿದ್ಯಾಲಯದಿಂದ ಪದವೀಧರನಾದ. ಚೀನೀ ಭಾಷೆಯಲ್ಲಿ ಪ್ರಕಟವಾಗಿದ್ದ ಕಾರ್ಲ್‍ಮಾಕ್ರ್ಸ್‍ನ ಸಾಹಿತ್ಯವನ್ನು ಅಭ್ಯಾಸಮಾಡಿದ. ಕಮ್ಮೂನಿಸ್ಟ್ ಪ್ರಸಿದ್ಧ ಪತ್ರಿಕೆಯನ್ನು ಮೊದಲುಗೊಂಡು ಅನೇಕ ಪುಸ್ತಕಗಳನ್ನು ಓದಿ ಮನನ ಮಾಡಿದುದರ ಫಲವಾಗಿ ಮಾಕ್ರ್ಸ್‍ವಾದದ ಕಡೆಗೆ ಈತನ ಮನಸ್ಸು ಪ್ರೇರಿತವಾಯಿತು. ಮಾಕ್ರ್ಸ್‍ವಾದದ ಕಡೆಗೆ ಈತನ ಮನಸ್ಸು ಪ್ರೇರಿತವಾಯಿತು. ಮಾಕ್ರ್ಸ್ ಪಂಥದ ಪ್ರಚಾರದಲ್ಲಿ ಶ್ರದ್ಧೆ ವಹಿಸಿ ದುಡಿಯಲು ಆರಂಭಿಸಿದ. ಇದೇ ಸಂದರ್ಭದಲ್ಲಿ ಪೀಕಿಂಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಮಗಳನ್ನು ಮದುವೆಯಾದ(1920). ಹತ್ತು ವರ್ಷಗಳ ಬಳಿಕ ಈಕೆ, ಕ್ರಾಂತಿಯ ಸಮಯದಲ್ಲಿ, ಮರಣದಂಡನೆಗೆ ಗುರಿಯಾದಳು.

	ಮಾವೋ ಮತ್ತು ಇತರ ಹನ್ನೊಂದು ಜನ ಬುದ್ಧಿಜೀವಿಗಳು ಕಮ್ಯೂನಿಸ್ಟ್ ಪಕ್ಷವನ್ನು 1921ರಲ್ಲಿ ಷಾಂಗೈನಲ್ಲಿ ಸ್ಥಾಪಿಸಿದರು. ಮಾವೊ ಹನನ್ ನಾಡಿಗೆ ಹಿಂದಿರುಗಿ 1927ರಲ್ಲಿ ಷಾಂಗೈನಲ್ಲಿ ಸ್ಥಾಪಿಸಿದರು. ಮಾವೊ ಹನನ್ ನಾಡಿಗೆ ಹಿಂದಿರುಗಿ 1927ರ ತನಕ ಹನನ್ ಪ್ರಾಂತವನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ. ಈ ಪ್ರಾಂತದ ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ. ಪಟ್ಟಣದ ಶ್ರಮಜೀವಿಗಳನ್ನೂ ಗಣಿಕೆಲಸಗಾರರನ್ನೂ ಸಂಘಟಿಸಿ. ಕೂಲಿಕಾರರ ಮುಷ್ಕರವನ್ನು ಯಶಸ್ವಿಯಾಗಿ ಸಂಘಟಿಸಿದುದಕ್ಕಾಗಿ 1922ರಲ್ಲಿ ಈತನನ್ನು ಕೈಸೆರೆಹಿಡಿಯಲು ಸರ್ಕಾರಿ ಆಜ್ಞೆ ಹೊರಟಿತ್ತು. 1923ರಲ್ಲಿ ಕ್ಯಾಂಟನ್‍ನಲ್ಲಿ ನಡೆದ ರಾಷ್ಟ್ರೀಯ ಕಮ್ಯೂನಿಸ್ಟ್ ಸಭೆಯಲ್ಲಿ ಕೇಂದ್ರಸಮಿತಿಯ ಸದಸ್ಯನಾಗಿ ಪ್ರಥಮಬಾರಿ ಚುನಾಯಿತನಾದ. ಸಂಘಟನೆಯ ಹೊಣೆ ಈತನ ಮೇಲೆ ಬಿತ್ತು. ಅನಂತರ ಚೀನದ ಕಮ್ಯೂನಿಸ್ಟ್ ಪಕ್ಷ ಚೀನದ ಕಾಮಿಂಟಾಂಗ್ (ರಾಷ್ಟ್ರೀಯ ಪಕ್ಷ) ಪಕ್ಷದೊಡನೆ ಕೂಡಿ ಕೆಲಸಮಾಡಲು ಪ್ರಾರಂಭಿಸಿತು. ಮಾವೊ ಕಾಮಿಂಟಾಂಗ್ ಪಕ್ಷದ ಕೇಂದ್ರ ಸಮಿತಿಯಲ್ಲಿದ್ದುಕೊಂಡು ಕ್ರಾಂತಿಕಾರಿ ಪಥದ ಶಂಕು ಸ್ಥಾಪನೆ ಮಾಡಿದ. ಸುನ್‍ಯಾತ್‍ಸೇನ್ ತೀರಿಕೊಂಡಮೇಲೆ (1925) ಅವರ ಸ್ಥಾನದಲ್ಲಿ ಅಧ್ಯಕ್ಷರಾದ ಚಿಯಾಂಗ್ ಕೈ ಷೇಕ್ ಸ್ಥಿರಸರ್ಕಾರ ಸ್ಥಾಪಿಸಿದರಾದರೂ ಜನತೆಯ ಕೈಗೆ ಅಧಿಕಾರ ಬಂದಿರಲಿಲ್ಲ. ಮಾವೊ, ಆಗ್ನೇಯ ಚೀನದಲ್ಲಿ ಚೀನೀ ಜನತಾ ಗಣರಾಜ್ಯಸ್ಥಾಪಿಸಿ ಚಿಯಾಂಗ್‍ಗೆ ವಿರುದ್ಧವಾಗಿ ನಿಂತ. ಕಮ್ಯೂನಿಸಮ್ ತತ್ತ್ವ ಪ್ರಸಾರ ಮತ್ತು ಸಂಘಟನೆಗಳನ್ನು ಎಲ್ಲ ಕಡೆ ತೀವ್ರಗೊಳಿಸಿದ. ರೈತರ ಸಂಘಟನೆಯಿಂದ ಮಾತ್ರ ಸಾಮ್ರಾಜ್ಯವಾದವನ್ನು ಮುರಿಯಲು ಸಾಧ್ಯವೆಂಬುದು ಇವನ ನಂಬಿಕೆಯಾಗಿತ್ತು. ರಾಷ್ಟ್ರೀಯ ರೈತರ ಆಂದೋಲನದ ಮುಖ್ಯಸ್ಥನಾಗಿ ಮಾವೊ ದುಡಿಯಲಾರಂಭಿಸಿದ. ರಾಷ್ಟ್ರೀಯ ಕ್ರಾಂತಿ ಸೈನ್ಯವನ್ನು ತಯಾರಿಸುವುದು ಇವನ ಗುರಿಯಾಗಿತ್ತು. 1927 ಮಾವೋನ ಬದುಕಿನ ಚರಿತ್ರೆಯಲ್ಲಿ ಮುಖ್ಯ ಘಟ್ಟವೆನ್ನಬಹುದು. ಚೀನೀ ರಾಷ್ಟ್ರೀಯ ಚರಿತ್ರೆಯಲ್ಲಿ ಕೂಡ ಇದು ನಿರ್ಧಾರಕ ವರ್ಷ. 1925-27ರಲ್ಲಿ ರೈತರು ಕಂದಾಯ ನಿರಾಕರಣೆ ಚಳವಳಿಯನ್ನು ಹೂಡಿದರು. ಹನನ್ ಪ್ರಾಂತದಲ್ಲಿ ಮಾವೋ ಇದಕ್ಕಾಗಿ ಶ್ರಮಿಸಿದ. ಆದರೆ ಸರ್ಕಾರದ ಸೈನ್ಯ ರೈತರ ದಂಗೆಯನ್ನು ದಮನಗೊಳಿಸಿತು; ಚಳವಳಿ ವಿಫಲವಾಯಿತು. ಈ ಘಟನೆ ಮುಂದೆ ಚೀನದ ರಾಜಕೀಯ ಜೀವನದಲ್ಲಿ ಪರಿವರ್ತನೆಗೆ ಕಾರಣವಾಯಿತು. ಚೀನದ ಕಮ್ಯೂನಿಸ್ಟ್ ಪಕ್ಷ ಹಾಗೂ ಕಾಮಿಂಟಾಂಗ್ ಪಕ್ಷಗಳ ನಡುವೆ ಒಡಕು ಮೂಡಿತು. ಭಿನ್ನಾಭಿಪ್ರಾಯ ಬಲವಾಗಿ ಎರಡೂ ಪಕ್ಷಗಳು ನೇರವಾಗಿಯೇ ಕಾದಾಡತೊಡಗಿದವು. ಮಾವೋ ಕಮಿಂಟಾಂಗ್ ವಿರುದ್ಧವಾಗಿ ಕ್ರಾಂತಿ ಯುದ್ಧವನ್ನು ಸಂಘಟಿಸಲಾರಂಭಿಸಿದ. ಮಾಸ್ಕೋ ನಾಯಕತ್ವ ಸರಿಯಾಗ ಮಾರ್ಗದರ್ಶನ ಮಾಡಲಿಲ್ಲವೆಂದು ಭಾವಿಸಿದ ಮಾವೊ ಪಟ್ಟಣಗಳ ಶ್ರಮಜೀವಿಗಳನ್ನು ಮಾತ್ರ ಸಂಘಟಿಸಿದರೆ ಸಾಲದು. ಮುಖ್ಯವಾಗಿ ಹಳ್ಳಿಗಳಲ್ಲಿ ರೈತರನ್ನು ಸಂಘಟಿಸಿದರೆ ಜನತಾಕ್ರಾಂತಿ ಯಶಸ್ವಿಯಾಗುವುದೆಂದು ಭಾವಿಸಿ ಆ ಪ್ರಕಾರ ಕಾರ್ಯೋನ್ಮುಖನಾದ.

	ಗುಡ್ಡಗಾಡುಗಳಲ್ಲಿ ರೈತರನ್ನು ತರಬೇತಿಮಾಡಿ ಕೂಡಯುದ್ಧಕ್ಕಾಗಿ ಸೈನ್ಯವನ್ನು ಸಿದ್ಧಗೊಳಿಸಿದ. ಕಿಯಾಂಗ್ಸಿ ಎಂಬ ವಿಭಾಗದಲ್ಲಿ ಕೆಂಪು ಸೈನ್ಯ (ರೆಡ್ ಗಾಡ್ರ್ಸ್) ಕಾರ್ಯ ಪ್ರಾರಂಭಿಸಿತು. ಸ್ವತಂತ್ರ ನಾಯಕತ್ವ ಸಂಘಟನೆಗಳ ಅನುಭವ ಪಡೆದ ಮಾವೋ ಹೊಸ ಸಿದ್ಧಾಂತಗಳ ಕನಸು ಕಾಣಲಾರಂಭಿಸಿದ. 1929-31ರ ತನಕ ಈತ ಬಹಳ ಅಪಾಯದ ರಾಜಕೀಯ ಜೀವನ ನಡೆಸಿದ. ಕಮ್ಯೂನಿಸ್ಟ್ ನಿಯಂತ್ರಣಕ್ಕೊಳಗಾದ ಸರ್ಕಾರದ ನೆಲೆಯನ್ನು ಸ್ಥಾಪಿಸಿದ. ದಕ್ಷಿಣ ಮತ್ತು ಮಧ್ಯಚೀನದಲ್ಲಿ ಕಮ್ಯೂನಿಸ್ಟ್ ಶಕ್ತಿ ಬೆಳೆಯಿತು. 1931ರಲ್ಲಿ ಜಪಾನ್ ಮಂಚೂರಿಯಾದಲ್ಲಿ ಆಕ್ರಮಣ ನಡೆಸಿದಾಗ ಕೂಡ ಚಿಯಾಂಗ್ ಕೈಷೇಕ್ ಕೆಂಪು ಸೈನ್ಯವನ್ನು ಧ್ವಂಸಮಾಡುವ ಸನ್ನಾಹದಲ್ಲಿ ತೊಡಗಿದ್ದ. ಮಾವೋ ಆತನ ದೊಡ್ಡ ಸೈನ್ಯದೊಡನೆ ಜಾಣತನದಿಂದ ಹೋರಾಡಿ ತನ್ನ ಸೈನ್ಯವನ್ನು ರಕ್ಷಿಸಿಕೊಂಡ. ಆದರೆ ಈ ಯುದ್ಧದಲ್ಲಿ ಮಾವೋ ಅನಂತ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಬೇಕಾಯಿತು. 1934ರಲ್ಲಿ ಚಿಯಾಂಗನ ಸೈನ್ಯದ ಆಕ್ರಮಣವನ್ನು ಎದುರಿಸಲಾರದೆ ತನ್ನ 85000 ಜನ ಬೆಂಬಲಿಗರೊಂದಿಗೆ ಈಶಾನ್ಯ ಚೀನಕ್ಕೆ ದೀರ್ಘ ಯಾತ್ರೆ ಕೈಗೊಂಡ. ಇದು ಅತ್ಯಂತ ಕಷ್ಟಕರವೂ ಅಪಯಕಾರಿಯೂ ಆಗಿತ್ತು. 6000 ಮೈಲುದೂರವನ್ನು (9700 ಕಿಮೀ) ಒಂದು ವರ್ಷಕಾಲ ಪ್ರಯಾಣ ಮಾಡಿ ಷೇನ್ಸಿ ಪ್ರಾಂತವನ್ನು ಈ ಯಾತ್ರೆ ತಲುಪಿತು. ಅಳಿದುಳಿದ ಕಮ್ಯೂನಿಸ್ಟರನ್ನು ಸಂಘಟಿಸಿದ ಈ ಯಾತ್ರೆ ಚರಿತ್ರೆಯಲ್ಲಿ ದೀರ್ಘಯಾತ್ರೆ (ದಿ ಲಾಂಗ್ ಮಾರ್ಚ್) ಎಂದೇ ಪ್ರಸಿದ್ಧವಾಗಿದೆ.

	ಎರಡನೆಯ ಮಹಾಯುದ್ಧಕಾಲದಲ್ಲಿ ಚೀನದ ಕಮ್ಯೂನಿಸ್ಟ್ ಪಕ್ಷ ಬಲಗೊಂಡಿತು. ಈ ಯುದ್ಧದ ಲಾಭ ಪಡೆದು ಮಾವೋ ತನ್ನ ನಾಯಕತ್ವವನ್ನು ಭದ್ರಪಡಿಸಿಕೊಂಡ. ಯುದ್ಧಕಾಲದಲ್ಲಿ ಕಾಮಿಂಟಾಂಗ್ ಸೇನೆ ಒಳನಾಡಿಗೆ ಸರಿದಂತೆಲ್ಲ ಮಾವೋ ಗೆರಿಲ್ಲಸ ಯುದ್ಧ ತಂತ್ರದ ಮೂಲಕ ಕಮ್ಯೂನಿಸಮ್ ಅನ್ನು ಹರಡತೊಡಗಿದ. 1945ರಲ್ಲಿ ಜಪಾನ್ ಸೋತಿತು. ಈ ವೇಳೆಗೆ ಮಾವೋ ಮುಖಂಡತ್ವದ ಚೀನಿ ಕಮ್ಯೂನಿಸ್ಟ್ ಪಕ್ಷದ ಸದಸ್ಯರ ಸಂಖ್ಯೆ ಹತ್ತು ಲಕ್ಷಕ್ಕೂ ಮಿಕ್ಕಿದ್ದು, ಅದರಲ್ಲಿ 9 ಲಕ್ಷ ಸೈನಿಕರಿದ್ದರು. ಮಾವೋ ಮತ್ತು ಚಿಯಾಂಗ್ ಕೈಷೇಕರಲ್ಲಿ ಒಮ್ಮತವನ್ನು ತರಬೇಕೆಂಬ ಅಮೆರಿಕದ ಪ್ರಯತ್ನ ವಿಫಲವಾಯಿತು. 1946ರಲ್ಲಿ ಮಂಚೂರಿಯಲ್ಲಿ ಕಮ್ಯೂನಿಸ್ಟರಿಗೂ ಕಾಮಿಂಟಾಂಗ್ ಪಕ್ಷದವರಿಗೂ ಹೋರಾಟ ಆರಂಭವಾಯಿತು. 1949ರಲ್ಲಿ ಚಿಯಾಂಗ್ ಸರ್ಕಾರ ಕುಸಿಯಿತು. ಅದೇ ವರ್ಷ ಮಾವೋ ಚೀನೀ ಜನತಾ ಗಣರಾಜ್ಯ ಘೋಷಿಸಿ ಅದರ ಪ್ರಥಮ ಅಧ್ಯಕ್ಷನಾದ.

	1959ರಲ್ಲಿ ಈ ಅಧ್ಯಕ್ಷತೆಗೆ ರಾಜೀನಾಮೆ ನೀಡಿದರೂ ಚೀನೀ ಕಮ್ಯೂನಿಸ್ಟ್ ಪಕ್ಷದ ಅಧ್ಯಕ್ಷನಾಗಿ ಮುಂದುವರಿದ.

	ಕಮ್ಯೂನಿಸ್ಟ್ ಸಿದ್ಧಾಂತಕ್ಕೆ ಮಾವೋ ಕೊಡುಗೆ ಅಗಾಧವಾದ್ದು. ಸಮಾನತೆಯ ಆಧಾರದ ಪ್ರಜಾಪ್ರಭುತ್ವದ ರಚನೆಗಾಗಿ ಈತ ಶ್ರಮಿಸಿದ. ಆಡಳಿತಷಾಹಿಗೆ ಈತ ಸದಾ ವಿರುದ್ಧವಾಗಿದ್ದ. ಸಮಾಜಗಳ ಕ್ರಾಂತಿಯನ್ನು ಬಡರೈತ ಹೇಗೆ ಸಾಧಿಸಬೇಕೆಂಬುದಕ್ಕೆ ಸೂತ್ರಗಳನ್ನು ರೂಪಿಸಿದವನು ಮಾವೋ, ಮಾಕ್ರ್ಸ್ ಬೋಧಿಸಿದ ಆಡಳಿತಷಾಹಿ ವಿರೋಧಿ, ಊಳಿಗಮಾನ್ಯ ಜಮೀನ್ದಾರಿ ಒಡೆತನ ವ್ಯವಸ್ಥೆಯನ್ನು ಉರುಳಿಸಿ ಸಮಾಜವಾದವನ್ನು ಸ್ಥಾಪಿಸುವುದು ರೈತಕ್ರಾಂತಿಯಿಂದ ಸಾಧ್ಯವೆಂಬುದನ್ನು ತೋರಿಸಿಕೊಟ್ಟ. ಮಾವೋನ ಕೆಂಪು ಸೇನೆಯ ದೀರ್ಘಯಾತ್ರೆ, ಜಪಾನಿನ ವಿರುದ್ಧ ಯುದ್ಧ, ಚಿಯಾಂಗ್ ಕೈಷೇಕ್ ಸರ್ಕಾರದ ವಿರುದ್ಧ ಈ ಹೋರಾಟಗಳು (1925-49) ಆಧುನಿಕ ಚೀನದ ಅಸ್ತಿಭಾರವನ್ನು ನಿರ್ಮಿಸಿದುವು. ಆಡಳಿತಷಾಹಿಯ ವಿರೋಧ, ಸ್ವಾವಲಂಬನೆ, ಕ್ರಾಂತಿಕಾರಿ ಚಲನಶೀಲತೆ, ಪಕ್ಷದಲ್ಲಿ ಯಜಮಾನ ವ್ಯವಸ್ಥೆ ಬೆಳೆಯದಂತೆ ಎಚ್ಚರಿಕೆ-ಇವು ಮಾವೋ ಸಿದ್ಧಾಂತದ ಮೂಲಸೂತ್ರಗಳು. ಕ್ರಾಂತಿ ಬೇರೂರಿ ನೆಲೆಗೊಳ್ಳಬೇಕಾದರೆ ಹೋರಾಟ ಮುಂದುವರಿಯಲೇಬೇಕು ಎಂಬುದು ಈತನ ಬೋಧನೆಯಾಗಿದೆ. 1958-59ರಲ್ಲಿ ಈತ ಪ್ರಾರಂಭಿಸಿದ ಮುನ್ನೆಗೆತ ಚಳವಳಿಯ (ಗ್ರೇಟ್ ಲೀಪ್ ಫಾರ್ವರ್ಡ್) ಹಿಂದಣ ಉದ್ದೇಶ ಸಿದ್ಧಾಂತಕ್ಕೂ ಆಚರಣೆಗೂ ನಡುವೆ ಅಂತರ ಇರದಂತೆ ಮಾಡುವುದೂ ಸಮಷ್ಟಿಹಿತಸಾಧನೆಯಲ್ಲಿ ಜನಸಾಮಾನ್ಯರ ಬೆಂಬಲ ಗಳಿಸುವುದೂ ಆಗಿತ್ತು.

	1966ರಲ್ಲಿ ಮಾವೋ ಆರಂಭಿಸಿದ ಸಾಂಸ್ಕøತಿಕ ಕ್ರಾಂತಿ ಹಲವೆಡೆಗಳಲ್ಲಿ ಬಹಳ ಮಟ್ಟಿಗಿನ ಟೀಕೆಗೆ ಗುರಿಯಾಗಿದೆ. ಕ್ರಾಂತಿ ಕೊನೆಗೊಂಡಿಲ್ಲ, ಅದು ಮುಂದುವರಿಯಬೇಕು ಎಂದು ಮಾವೋ ಹೇಳಿದ. ಪಾಶ್ಚಾತ್ಯ ಮಾದರಿಯ ಬಂಡವಾಳ ಷಾಹಿ ವ್ಯವಸ್ಥೆ. ರಷ್ಯದ ಮಾದರಿಯ ವ್ಯವಸ್ಥೇ-ಎರಡನ್ನೂ ತಿರಸ್ಕರಿಸಿ ಹೊಸ ಮಾದರಿಯ ಸಮಾಜ ರಚಿಸುವುದು ಅದರ ಉದ್ದೇಶವಾಗಿತ್ತು. ಆದರೆ ಅದು ಕೊನೆಗೆ ಬಹಳಷ್ಟು ಹಿಂಸೆಯಲ್ಲಿ ಪರ್ಯವಸಾನಗೊಂಡಿತು. ಕೊನೆಗೆ 1968ರ ವೇಳೆಗೆ ಚಳವಳಿ ಸ್ತಬ್ಧವಾಯಿತು.

	9 ಸೆಪ್ಟೆಂಬರ್ 1976ರಂದು ಮಾವೋ ತೀರಿಕೊಂಡ. ಅನಂತರ ಈತನ ಪತ್ನಿ ಜಿಯಾಂಗ್‍ಕ್ವಿಂಗ್ ಮತ್ತು ಇತರ ಮೂವರು ಮಾವೊ ಸಿದ್ಧಾಂತವನ್ನೇ ಮುಂದುವರಿಸಲು ಯತ್ನಿಸಿದ್ದರು. ಆದರೆ ಅನಂತರ ಚೀನೀ ನಾಯಕತ್ವ ವಹಿಸಿದವರು ಈ ನಾಲ್ವರನ್ನು ಪಿತೂರಿಗಾರರೆಂದು ಕರೆದು ಇವರ ವಿರುದ್ಧ ಕ್ರಮ ತೆಗೆದುಕೊಂಡರು. ಅವರ ಆ ಪ್ರಯತ್ನ ವಿಫಲವಾಯಿತು.

	ಮಾವೋ ಹುಟ್ಟು ಹೋರಾಟಗಾರನಾಗಿದ್ದಂತೆ ಉತ್ತಮ ಆಡಳಿತಗಾರನೂ ಬುದ್ಧಿಜೀವಿಯೂ ಹೌದು. ಕಮ್ಯೂನಿಸ್ಟ್ ತತ್ತ್ವಗಳನ್ನು ನೂತನವಾಗಿ ಅರ್ಥ ಮಾಡಿ ಹೇಳುವುದರಲ್ಲಿಯೂ ಈತ ನಿಷ್ಣಾತನಾಗಿದ್ದ. ಈತ ಬರೆದಿರುವ ಅನೇಕ ಪುಸ್ತಕಗಳು ಕಮ್ಯೂನಿಸ್ಟ್ ಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆಯಾಗಿವೆ. ಸ್ಟ್ರಾಟೆಜಿಕ್ ಪ್ರಾಬ್ಲಮ್ಸ್ ಆಫ್ ಚೈನಾಸ್ ರೆವಲೂಷನರಿ ವಾರ್ (1936), ಆನ್ ಪ್ರೊಟ್ರಾಕ್ಟೆಡ್ ವಾರ್ (1938), ಆನ್ ದಿ ನ್ಯೂ ಸ್ಟೇಜ್ (1938), ದಿ ಚೈನೀಸ್ ರೆವಲೂಷನ್ ಅಂಡ್ ದಿ ಚೈನೀಸ್ ಕಮ್ಯೂನಿಸ್ಟ್ ಪಾರ್ಟಿ (1940), ಆನ್ ದಿ ನ್ಯೂ ಡೆಮಾಕ್ರಸಿ-ಮೊದಲಾದವು ಈತನ ಕೆಲವು ಕೃತಿಗಳು. ಇವನ ಎಲ್ಲ ಬರೆಹಗಳನ್ನೊಳಗೊಂಡ ಕಲೆಕ್ಟೆಡ್ ರೈಟಿಂಗ್ಸ್ ಆಫ್ ಮಾವೋ ತ್ಸೆ ಡುಂಗ್ ಎಂಬ ಕೃತಿ ಹತ್ತು ಸಂಪುಟಗಳಲ್ಲಿ ಪ್ರಕಟವಾಗಿದೆ (1971-72).
 (ಎಚ್.ಎಸ್.ಕೆ.; ಜಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ